Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೆಹಬೂಬಾ ಕಾರ್ತೀಕ್ ನಸ್ರಿಯಾ ಪ್ರೇಮಕಥೆಗೆ ಜಾತಿಯೇ ವಿಲನ್ --ರೇಟಿಂಗ್: 3.5/5 ****
Posted date: 16 Sat, Mar 2024 08:32:17 AM
ಹಿಂದೂ ಯುವಕ  ಮುಸ್ಲಿಂ ಯುವತಿಯ ಸಾಕಷ್ಟು ಪ್ರೇಮಕಥೆಗಳನ್ನು ನಾವೆಲ್ಲ ತೆರೆಮೇಲೆ ನೋಡಿದ್ದೇವೆ. ಆದರೆ ಈವಾರ ತೆರೆಕಂಡಿರುವ ಮೆಹಬೂಬಾ ಕೂಡ ಹಿಂದೂ ಮುಸ್ಲಿಂ ಪ್ರೇಮಕಥೆಯೇ ಆದರೂ,  ಹಿಂದಿನ  ಚಿತ್ರಗಳಿಗಿಂತ ಇದು ಸ್ವಲ್ಪ ವಿಭಿನ್ನ ಎನ್ನಬಹುದು. 
 
ಅದಕ್ಕೆ ಒಂದಷ್ಟು ಕಾರಣಗಳೂ ಇವೆ. ಚಿತ್ರದಲ್ಲಿ ನಾಯಕ ಕಾರ್ತೀಕ್(ಬಿಗ್‌ಬಾಸ್ ಶಶಿ) ಒಬ್ಬ ಹಿಂದೂ ಯುವಕ ಹಾಗೂ ಮಾಜಿ ಶಾಸಕ ಹಾಗೂ ಎಂಪಿ ಕ್ಯಾಂಡಿಡೇಟ್(ಜೈಜಗದೀಶ್) ಒಬ್ಬರ ಮಗ. ನಾಯಕಿ ನಸ್ರಿಯಾ ಬಾನು(ಪಾವನಾಗೌಡ) ಬಡ ಮುಸ್ಲಿಂ ಕುಟುಂಬದಿಂದ ಬಂದ ಯುವತಿ. ಅಗ್ರಿಕಲ್ಚರ್‌ನಲ್ಲಿ ಪಿಹೆಚ್‌ಡಿ ಮಾಡುತ್ತಿರುವ ವಿದ್ಯಾವಂತೆ, ಇಲ್ಲಿ ನಾಯಕನ ವಯಸ್ಸು ೨೫ ವರ್ಷವಾದರೆ, ನಾಯಕಿಯ ವಯಸ್ಸು ೨೭, ಇವರಿಬ್ಬರ ನಡುವೆ ಪರಿಚಯವಾಗುವುದೇ ಒಂದು ವಿಶೇಷ ಸಂದರ್ಭದಲ್ಲಿ, ಇನ್ನು ಇವರಲ್ಲಿ ಪ್ರೀತಿ ಹುಟ್ಟುವುದು ಮತ್ತೊಂದು ವಿಶೇಷ ಸಂದರ್ಭದಲ್ಲಿ. ನಿರ್ದೇಶಕರು ಈ  ಪ್ರೇಮ ಕಥೆಯನ್ನು ಬಹುತೇಕ ಪೋಲೀಸ್ ಸ್ಟೇಷನ್‌ನಲ್ಲೇ ಹೇಳಿ ಮುಗಿಸಿದ್ದಾರೆ, ಅಂದರೆ ಚಿತ್ರದ ಶೇಕಡಾ ಎಪ್ಪತ್ತರಷ್ಟು ಕಥೆ ನಡೆಯುವುದು ಪೋಲೀಸ್ ಸ್ಟೇಷನ್‌ನಲ್ಲಿ.  ನೈಜ ಘಟನೆಯಾಧಾರಿತ  ಚಿತ್ರ ಇದಾಗಿದ್ದು,  ಪೊಲೀಸ್ ಠಾಣೆಯಲ್ಲಿ ಇಂಥ ಕೇಸ್‌ಗಳನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೆ, ಇದರ ಹಿಂದೆ ರಾಜಕಾರಣಿಗಳ ಕೈವಾಡ ಸೇರಿದಾಗ ಪ್ರಕರಣಗಳು ಯಾವರೀತಿ ತಿರುವು ಪಡೆದುಕೊಳ್ಳುತ್ತವೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ತೋರಿಸಿದ್ದಾರೆ, ಮನೆಯಲ್ಲಿ ಪ್ರೀತಿಯನ್ನು ಒಪ್ಪಲ್ಲ ಎಂದಾಗ  ನಾಯಕ ಒಂದು ನಿರ್ಧಾರಕ್ಕೆ  ಬರುತ್ತಾನೆ. ಓಡಿಹೋಗಿ ಮದುವೆಯಾಗಲು ಮುಂದಾಗುತ್ತಾನೆ. ಆದರೆ  ವಿದ್ಯಾವಂತೆಯಾದ  ನಾಯಕಿ  ಸ್ವಲ್ಪ ಯೋಚಿಸು ಎಂದು ಕಾರ್ತೀಕ್ ಗೆ  ಹೇಳಿದಾಗ, ತನ್ನ ಪ್ರೀತಿಯನ್ನು ಅನುಮಾನಿಸುವೆಯಾ ಎಂದು ನಾಯಕಿಗೆ ಹೇಳುತ್ತಾನೆ. ಆಗ ನಾಯಕಿ ಅನಿವಾರ್ಯವಾಗಿ  ಒಪ್ಪಿಕೊಳ್ಳಬೇಕಾಗುತ್ತದೆ. ನಾಯಕ ಪ್ರತಿ ಹಂತದಲ್ಲೂ  ತಪ್ಪು ಮಾಡುತ್ತಲೇ ಬರುತ್ತಾನೆ.  ನಾಯಕಿ  ತಾನೆ ಏನು ಮಾಡಿಯಾಳು. ಹೀಗಾಗಿ  ಈ ಮುಗ್ಧ ಪ್ರೇಮಿಗಳು ತಾವಾಗೇ ಮೋಸದ ಜಾಲದಲ್ಲಿ  ಸಿಕ್ಕಿ ಹಾಕಿಕೊಳ್ಳುವಂತಾಗುತ್ತದೆ, ಈ ಪ್ರಕರಣದಲ್ಲಿ ಪ್ರೇಮಿಗಳನ್ನು ಒಂದು ಮಾಡಬೇಕಾದ ಪೊಲೀಸರೇ  ಪೋಷಕರ ಜೊತೆ ಕೈಜೋಡಿಸುತ್ತಾರೆ. ಆದರೆ ನಾಯಕ ಹಠ ಬಿಡದೆ ನಾಯಕಿಯನ್ನೇ ಮದುವೆಯಾಗುವುದಾಗಿ ತಂದೆ, ಸಹೋದರ ಎಲ್ಲರನ್ನ ಎದುರು ಹಾಕಿಕೊಳ್ಳುತ್ತಾನೆ, ಈ ಮುಗ್ಧ ಪ್ರೇಮಿಗಳು ಕೊನೆಗಾದರೂ ಒಂದಾದರಾ ಇಲ್ವಾ ಎನ್ನುವುದೇ ಮೆಹಬೂಬಾ ಚಿತ್ರದ ಕಥೆ. ಚಿತ್ರದ ಕ್ಲೈಮ್ಯಾಕ್ಸ್ ಎಂಥವರ ಕಣ್ಣಲ್ಲಾದರೂ ನೀರು ಬರಿಸುತ್ತದೆ. 
 
ತೆರೆಮೇಲೆ ಮುದ್ದಾಗಿ ಕಾಣುವ ನಾಯಕ ಶಶಿ ಮೊದಲ ಚಿತ್ರದಲ್ಲೇ ಶಹಬ್ಬಾಷ್ ಗಿಟ್ಟಿಸುತ್ತಾರೆ. ನಾಯಕಿ ಪಾವನಾಗೌಡ ಮುಸ್ಲಿಂ ಯುವತಿಯಾಗಿ  ನೋಡುಗರ ಮನ ಗೆಲ್ಲುತ್ತಾರೆ. ಇನ್ನು ಪೊಲೀಸ್  ಸಬ್ ಇನ್ ಸ್ಪೆಕ್ಟರ್ ಆಗಿ ಕಬೀರ್ ದುಹಾನ್ ಸಿಂಗ್ ಗಮನ ಸೆಳೆಯುತ್ತಾರೆ. ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರೀ  ಅವರ ಸಾಹಿತ್ಯದ  ಹಾಡುಗಳು ಕೇಳುವಂತಿವೆ, ಮ್ಯಾಥ್ಯೂಸ್ ಮನು ಅವರ ಸಂಗೀತ ಈ ಸಿನಿಮಾದ ಹೈಲೈಟ್‌ಗಳಲ್ಲೊಂದು.  ಕಿರಣ್ ಹಂಪಾಪುರ ಅವರ ಕ್ಯಾಮೆರಾದಲ್ಲಿ  ಇಡಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ,
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೆಹಬೂಬಾ ಕಾರ್ತೀಕ್ ನಸ್ರಿಯಾ ಪ್ರೇಮಕಥೆಗೆ ಜಾತಿಯೇ ವಿಲನ್ --ರೇಟಿಂಗ್: 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.